





ರಾಜಕೀಯ ಕ್ಷೇತ್ರದ ಕಡೆಗೆ ನಾಗರೀಕರು ಅನುಮಾನದಿಂದ ನೋಡುತ್ತಿರುವ ಪರ್ವ ಕಾಲದಲ್ಲಿ ರಾಜಕೀಯ ಕ್ಷೇತ್ರಕ್ಕೆ ಅಡಿಯಿರಿಸಿದ ನನ್ನ ಮೇಲೆ ಅನೇಕ ಗುರುತರ ಜವಾಬ್ದಾರಿಗಳನ್ನು ಭಾರತೀಯ ಜನತಾ ಪಕ್ಷ ಹೊರಿಸಿತ್ತು. ಹೀಗೆ ಹೊತ್ತ ಎಲ್ಲ ಜವಾಬ್ದಾರಿ ಮತ್ತು ಕರ್ತವ್ಯಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಡೆದು ಬಂದ ನನಗೆ ಅನೇಕ ಸವಾಲುಗಳು ಮತ್ತು ಅಡಚಣೆಗಳು ಎದುರಾದರೂ ಯಾವುದೇ ಕಾರಣಕ್ಕೂ ಬೆನ್ನು ತೋರಿಸದೆ ಎದೆಯೊಡ್ಡಿ ಎಲ್ಲವನ್ನೂ ಎದುರಿಸಲು ಕಾರಣರಾದ ನಾಗಪುರ ವಾರ್ಡ್ನ ಸಮಸ್ತ ನಾಗರೀಕರಿಗೆ ಮೊದಲು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ನನಗೆ ಮುಖಂಡರು ನೀಡಿದ ಹೊಸ ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭಗಳಲ್ಲಿ ನನ್ನನ್ನು ಕೈಹಿಡಿದು ಸರಿದಾರಿಯಲ್ಲಿ ಹೆಜ್ಜೆಗಳನ್ನು ಇರಿಸಲು ಸಹಕರಿಸಿದ ಪಕ್ಷದ ಎಲ್ಲ ನಾಯಕರುಗಳಿಗೂ ನಾನು ಕೃತಜ್ಞನಾಗಿದ್ದೇನೆ.
ಜನರ ಸೇವೆ ಮಾಡಲು ಅನೇಕ ಕ್ಷೇತ್ರಗಳು ಇದ್ದಾಗ್ಯೂ ರಾಜಕೀಯ ಕ್ಷೇತ್ರದಿಂದ ಅಸಂಖ್ಯಾತ ಜನರನ್ನು ತಲುಪಬಹುದೆಂಬ ಏಕೈಕ ಉದ್ದೇಶದಿಂದ ರಾಜಕೀಯ ಕ್ಷೇತ್ರವನ್ನೇ ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡೆ. ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಮೇಲೆ ಬದುಕನ್ನು ಸೀಮಿತ ಮಾಡಿಕೊಳ್ಳದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹೊಣೆಗಾರಿಕೆಯನ್ನು ಹೊತ್ತು ಆ ನಿಟ್ಟಿನಲ್ಲಿ ಕಳೆದ ಇಪ್ಪತ್ತು ವರ್ಷಗಳ ಕಾಲ ಅರ್ಹನಿಶಿ ದುಡಿದು ಇಂದು ನಿಮ್ಮಗಳ ಆಶೀರ್ವಾದದಿಂದ ಬಿಬಿಎಂಪಿಯ ನಾಗಪುರ ವಾರ್ಡ್ ಸದಸ್ಯನಾಗಿ, ಒಂದು ಅವಧಿಯ ಉಪ ಮೇಯರ್ ಆಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನ್ನದು.
ಜನರೊಂದಿಗೆ ದೈನಂದಿನ ಒಡನಾಟ ಮತ್ತು ಆ ಸಂದರ್ಭಗಳಲ್ಲಿ ಎದುರಾದ ನಾಗರೀಕ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನದೇ ಆದ ದೂರದೃಷ್ಟಿತ್ವ ಇರಿಸಿಕೊಂಡ ಪರಿಣಾಮ ನಾಗಪುರ ವಾರ್ಡ್ನ್ನು ಮಾದರಿ ವಾರ್ಡ್ ಆಗಿ ಮಾಡುವಲ್ಲಿ ಹೆಜ್ಜೆ ಹೆಜ್ಜೆಗೂ ಸಹಕರಿಸಿದ ನಾಗರೀಕರ ಸಹಕಾರವನ್ನು ನಾನೆಂದು ಮರೆಯುವುದಿಲ್ಲ.

Political Journey
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ನ ಮಹಾನಗರ ಪಾಲಿಕೆ ಸದಸ್ಯನಾಗಿ, ಉಪಮಹಾಪೌರರಾಗಿ ಹಾಗೂ ಇತರರ ಸಹಯೋಗದೊಂದಿಗೆ ಕೈಗೊಂಡ ಸಾಧನೆಗಳ ಪಕ್ಷಿನೋಟವನ್ನಷ್ಟೇ ನಿಮ್ಮ ಮುಂದಿಡುತ್ತಾ ಇದ್ದೇನೆ. ಬೇರೆಯವರ ಸಾಧನೆಯನ್ನು ನನ್ನ ಸಾಧನೆ ಎಂದು ಹೇಳಿಕೊಳ್ಳುವ ಸಂಸ್ಕೃತಿ ನನ್ನದಲ್ಲ.